ಮುತ್ತು ಲಕ್ಷ್ಮಿರೆಡ್ಡಿ
1886. ಹಿರಿಯ ಸಮಾಜಕರ್ತೆ, ಭಾರತದ ಶೋಷಿತ ಮಹಿಳೆಯರ ಉದ್ಧಾರ ಹಾಗೂ ಮಕ್ಕಳ ಏಳಿಗೆಗಾಗಿ ಬಹುವಾಗಿ ಶ್ರಮಿಸಿದ ಜಾಗತಿಕ ಮಹಿಳೆ. ಇವರು ಹುಟ್ಟಿದ್ದು ತಮಿಳುನಾಡಿನ ಪುದುಕೋಟೆ ಸಂಸ್ಥಾನದಲ್ಲಿ. ತಂದೆ ನಾರಾಯಣಸ್ವಾಮಿ ಓರ್ವ ಶಿಕ್ಷಕರು. ಇವರ ಬಾಲ್ಯದ ಶಿಕ್ಷಣ ತಂದೆಯ ಬಳಿಯಲ್ಲಿಯೇ ನಡೆಯಿತು. 1912ರಲ್ಲಿ ಮದ್ರಾಸಿನ ಮೆಡಿಕಲ್ ಕಾಲೇಜಿನ ಪದವೀಧರ ಅದರು. 1913ರಲ್ಲಿ ಟಿ. ಸುಂದರ ರೆಡ್ಡಿ ಎಂಬವರನ್ನು ವಿವಾಹವಾದರು. ಅನಂತರ ಇಂಗ್ಲೆಂಡಿನಲ್ಲಿ ಸ್ನಾತಕೋತ್ತರ ಶಿಕ್ಷಣ ಮುಗಿಸಿಕೊಂಡು ಹಿಂದಿರುಗಿದ ಇವರು ಸ್ತ್ರೀಯರ ಹಾಗೂ ಮಕ್ಕಳ ರೋಗಗಳ ಪರಿಣತ ವೈದ್ಯರಾಗಿ ವೃತ್ತಿಜೀವನ ಆರಂಭಿಸಿದರು.

1917ರಲ್ಲಿ ಅನಿಬೆಸಿಂಟರ ಪ್ರಭಾವಲಯದಲ್ಲಿ ಸಿಲುಕಿ ಭಾರತೀಯ ಮಹಿಳಾ ಸಂಘದ ಸದಸ್ಯರಾದರು ದೇವದಾಸಿಯರ ಸಮಸ್ಯೆ, ಮಕ್ಕಳ ಏಳಿಗೆ ಮುಂತಾದ ಕ್ಷೇತ್ರಗಳಲ್ಲಿ ದುಡಿದರು. 1926ರಲ್ಲಿ ಆಗಿನ ಮದ್ರಾಸು ಪ್ರಾಂತ್ಯದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ಪ್ರಥಮ ಮಹಿಳಾ ಸದಸ್ಯೆ ಎನಿಸಿಕೊಂಡರು. ಪರಿಷತ್ತಿನಲ್ಲಿ ಮಕ್ಕಳ ಹಾಗೂ ಮಹಿಳೆಯರ ಸಮಸ್ಯೆಗಳನ್ನು ಎತ್ತಿ ಹಿಡಿದು ಅವುಗಳ ಸುಧಾರಣೆಗಾಗಿ ಅಗ್ರಹಪಡಿಸಿದರು.

1931ರಲ್ಲಿ ಲಾಹೋರಿನಲ್ಲಿ ನಡೆದ ಅಖಿಲಭಾರತ ಮಹಿಳಾ ಅಧಿವೇಶನದ ಅಧ್ಯಕ್ಷೆಯಾಗಿ ಆಯ್ಕೆಗೊಂಡರು. 1933ರಲ್ಲಿ ಅಮೆರಿಕದ ಷಿಕಾಗೊನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಭಾಗವಹಿಸಿದರು. 1933ರಲ್ಲಿ ಭಾರತೀಯ ಮಹಿಳೆಯ ಹಕ್ಕಿನ ಚರ್ಚೆಗಾಗಿ ಇಂಗ್ಲೆಂಡಿಗೆ ಹೊರಟ ಮೂವರ ತಂಡದಲ್ಲಿ ಇವರೂ ಒಬ್ಬರಾಗಿದ್ದರು. ಖಾದಿ ಪ್ರಚಾರ ಹಾಗೂ ರಾಜಕೀಯ ಚಳವಳಿಯಲ್ಲಿ ಇವರದು ಮೇಲುಗೈ.

ವೈದ್ಯ ವೃತ್ತಿಯ ಜೊತೆಗೆ ಸಾಮಾಜಿಕ ಸೇವೆಯನ್ನು ಕೈಗೊಂಡು ಜನ ಸಾಮಾನ್ಯರಿಗೆ ಸಮೀಪವರ್ತಿಗಳಾಗಿದ್ದರು. ಅವ್ವೈ ಅನಾಥಾಲಯವನ್ನು ಸ್ಥಾಪಿಸಿದ ಇವರು ಅಡಿಯಾರಿನ ಕ್ಯಾನ್ಸರ್ ಸಂಶೋಧನ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯೆಯಾಗಿ ದುಡಿದರು. 1956ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. 			    
(ಎ.ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ